ಕಾಕತಿ ವೇಸ್ ನಲ್ಲಿದ್ದ ಕಚೇರಿ ಚಾಳ್ ನ ಅನ್ನಪೂರ್ಣ ಹೂಗಾರ್ ಅವರನ್ನು ಹುಡುಕಿಕೊಂಡು ಹೋಗಿದ್ದೆ. ಅವರ ತಂದೆ ದಿ. ಫಕಿರಪ್ಪ ಹಿರಿಯ ಪತ್ರಕರ್ತರು. ಅದೇ ತಾನೇ ಬರೆಯಲು ಶುರು ಹಚ್ಚಿಕೊಂಡಿದ್ದ ಅನ್ನಪೂರ್ಣ ಸಾಹಿತ್ಯಕ ಸಂದರ್ಭದಲ್ಲಿ ಪರಿಚಯವಾದವರು. ಅವರ ಕಟ್ತೊತ್ತಾಯದ ಮೇರೆಗೆ ಬೆಂಗಳೂರಿನಿಂದ ಕಲಬುರ್ಗಿಗೆ ಹೋಗುವಾಗ ವಯಾ ಬೆಳಗಾವಿಗೆ ಇಳಿದಿದ್ದೆ.ಅವರ ಮುಖಾಂತರ ಮೊದಲ ಬಾರಿಗೆ ಬೆಳಗಾವಿಗೆ ಬಂದ ನಾನು ಅಂದಿನಿಂದ ಇಂದಿನವರೆಗೆ ಬೆಳಗಾವಿಯೊಂದಿಗೆ ತಾಯಿಯ ನಂಟನ್ನು ಹೊಂದಿದ್ದೇನೆ.
ಅವರ ಜೊತೆಗೇನೆ ಕನ್ನಡಮ್ಮ ಕಚೇರಿಗೆ ಸೌಹಾರ್ದ ಭೇಟಿ ಕೊಟ್ಟಾಗ ತಮ್ಮ ಪತ್ರಿಕೆಗೆ ಬರಲು ಸಂಪಾದಕಿ ಉಮಾದೇವಿ ಅವರಿಂದ ಆಹ್ವಾನ.ಅಂಥ ಆಹ್ವಾನ ಸ್ವೀಕರಿಸಿ ೨೮.೧೨.೧೯೯೦ ರಂದು ಕನ್ನಡಮ್ಮನ ಸೇವೆಗೆ ತೊಡಗಿದೆ. ಆ ಸಂದರ್ಭದಲ್ಲಿಯೇ ಅನ್ನಪೂರ್ಣ ಅವರು ತಮ್ಮ ಮನೆಯ ಮುಂದೆಯೇ ಕಚೇರಿ ಚಾಳ್ ನಲ್ಲಿ ರೂಮ್ ಕೊಡಿಸಿದರು. ಅಲ್ಲಿಂದ ಒಳ ರಸ್ತೆಯಲ್ಲಿ ಕಾಲೇಜ್ ರಸ್ತೆ ತಲುಪುವ ಮಾರ್ಗದಲ್ಲಿನ ಮೆಸ್ ಒಂದರಲ್ಲಿ ಊಟಕ್ಕೆ ಮಾಸಿಕ ಲೆಕ್ಕದಲ್ಲಿ ವ್ಯವಸ್ಥೆಯೂ ಆಯ್ತು. ಆರಂಭದಲ್ಲಿ ಉಟನಾ ಇದು ಅನ್ನಿಸ್ತು. ಆಮೇಲೆ ಹೊಂದಿಕೆಯಾಯಿತು. ಗುಣಮಟ್ಟ ಹಿನ್ನೆಲೆಯಲ್ಲಿ ಜಾಲಗಾರ ಗಲ್ಲಿಯಲ್ಲಿನ ಮೆಸ್ ಗೆ ಶಿಫ್ಟ್ ಆದೆ. ಆ ಮೆಸ್ ನ ಸವಿತಾ ಅವರೊಂದಿಗೆ ಇಂದಿಗೂ ಅನನ್ಯ ಅವಿನಾಭಾವ ಸಂಬಂಧವಿದೆ. ನಾನು ನನ್ನವಳೊಂದಿಗೆ ಇಂದಿಗೂ ವಿಶೇಷ ಹಬ್ಬದ ದಿನಗಳಲ್ಲಿ ಊಟ ತಿಂಡಿ ಮಾಡಿಕೊಂಡು ಬರುತ್ತೇವೆ.
ಮೆಸ್ ಊಟವು ಒಂದೊಂದು ಬಾರಿ ಬೇಸರ ತರಿಸುತ್ತಿತ್ತು.ಅಮ್ಮನ ( ಉಮಾ ಶಂಕರರಾವ್ ) ಸಲಹೆಯಂತೆ ಅವಳೇ ಕೊಟ್ಟು ಕಳಿಸಿದ ಸ್ಟೋ ಇಟ್ಟುಕೊಂಡು ರೂಮಿನಲ್ಲೇ ಅಡಿಗೆ ಮಾಡಿಕೊಳ್ಳುತ್ತಿದ್ದೆ. ಸಾಂದರ್ಭಿಕವಾಗಿ ಇಂದಿಗೂ ಮೆಸ್ ಸಂಪರ್ಕ ಹೊಂದಿದ್ದೇನೆ.ಅಂಥ ಮೆಸ್ ಗಳು ಇಂದು ಕಾಲನ ಹೊಡೆತಕ್ಕೆ ಸಿಕ್ಕಿ ಏನಾಗಿವೆ, ಆಗುತ್ತಿವೆ. ಮನಸ್ಸಿಗೆ ಬೇಸರ ತರಿಸುತ್ತಿವೆ. ಸಾಂಪ್ರದಾಯಿಕ ಮೆಸ್ ಗಳು ಇಂದು ಸಾರಾಯಿ ಗುಡಂಗಡಿ ಆಗುತ್ತಿವೆಯೇ? ಹಾಗಂತ ಸಂಯುಕ್ತ ಕರ್ನಾಟಕ ವರದಿಗಾರ ಡಿ.ವಿ. ಕಮ್ಮಾರ್ ಬರೆದುಕೊಂಡಿದ್ದಾರೆ. ಅದರ ಪ್ರತಿಯನ್ನೇ ಇಲ್ಲಿ ನಿಮ್ಮ ಅವಗಾಹನೆಗೆ ಇಟ್ಟಿದ್ದೇನೆ. ವಿಮರ್ಶೆ ಮಾಡಿಕೊಳ್ಳಿ. ಮೆಸ್ ನಿರ್ವಾಹಕರು ಆತ್ಮ ವಿಮರ್ಶೆ ಮಾಡಿಕೊಳ್ಳಲಿ.
*ಉಮಾತನಯರಾಜ, ಬೆಳಗಾವಿ-ಕಲಬುರ್ಗಿ, ೩೦.೦೩.೨೦೧೧, ಸೆಲ್: ೯೫೯೧೩೨೩೪೫೩
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ